ಜಿನಸೇನ 1 -
ಹರಿವಂಶದ ಕರ್ತೃ. ಪುನ್ನಾಟ ಸಂಘಕ್ಕೆ ಸೇರಿದವ. ತನ್ನ ದೀರ್ಘ ವಂಶಾವಳಿಯನ್ನು ಕೊಟ್ಟಿದ್ದಾನೆ. ಈತನ ಹತ್ತಿರದ ಗುರು ಕೀರ್ತಿಸೇನ. ಈ ಸಂಘದ ಉಪದೇಶಕರು ಕರ್ಣಾಟಕದಿಂದ ಬಂದವರು. ಅವರಲ್ಲಿ ಕೆಲವರು ಗುಜರಾತು ಮುಂತಾದ ದೇಶಗಳಲ್ಲಿ ಮುಹೋನ್ನತಿಗೇರಿದರು. ಜಿನಸೇನ ವರ್ಧಮಾನಪುರದಲ್ಲಿ (ಕಾಠೇವಾಡಿಯಲ್ಲಿರುವ ವಾಧವಾನ್ ಕ್ಷೇತ್ರವೇ ಇದೆಂದು ಪರಿಭಾವಿಸಲಾಗಿದೆ) ಶಕವರ್ಷ 705ರಲ್ಲಿ ಎಂದರೆ, ಕ್ರಿ. ಶ. 783ರಲ್ಲಿ, ಇಂದ್ರಾಯುಧ, ಶ್ರೀವಲ್ಲಭ, ವತ್ಸರಾಜ ಮತ್ತು ವೀರಜಯವರಾಹ ಎಂಬ ದೊರೆಗಳು ಭಾರತದ ವಿವಿಧ ಭಾಗಗಳಲ್ಲಿ ಆಳುತ್ತಿರುವಾಗ ತನ್ನ ಗ್ರಂಥವನ್ನು ಪೂರ್ತಿಗೊಳಿಸಿದ. ಆ ಕಾಲದ ರಾಜಕೀಯ ಇತಿಹಾಸದ ವ್ಯಾಸಂಗಕ್ಕೆ ಇದರಲ್ಲಿನ ಉಲ್ಲೇಖಗಳು ತುಂಬ ಸಹಾಯಕವಾಗಿವೆ. ಜಿನಸೇನ ಅನೇಕ ಗ್ರಂಥ ಕರ್ತರನ್ನೂ ಅವರ ಕೃತಿಗಳನ್ನೂ ತನ್ನ ಗ್ರಂಥದಲ್ಲಿ ಎತ್ತಿಹೇಳಿದ್ದಾನೆ. ಅವರುಗಳಾರೆಂದರೆ, ಜೀವಸಿದ್ಧಿ ಮತ್ತು ಯುಕ್ತ್ಯನುಶಾಸನಗಳ ಕರ್ತೃವಾದ ಸಮಂತಭದ್ರ, ಸಿದ್ಧಸೇನ, ದೇವನಂದಿ, ವಜ್ರಸೂರಿ, ರವಿಷೇಣ, ಶಾಂತ, ವಿಶೇಷವಾದಿನ್, ಕುಮಾರಸೇನ, ವೀರಸೇನ ಮತ್ತು ಪಾಶ್ರ್ವಾಭ್ಯುದಯದ ಕರ್ತೃವಾದ ಜಿನಸೇನ (ನೋಡಿ- ಜಿನಸೇನ-2). ಇದರಿಂದ ಇಬ್ಬರು ಜಿನಸೇನರೂ ಹೆಚ್ಚುಕಡಿಮೆ ಸಮಕಾಲೀನರು ಎಂಬುದು ವ್ಯಕ್ತಪಡುತ್ತದೆ. ಜೊತೆಗೆ ವರಾಂಗಚರಿತ ಮತ್ತು ವರ್ಧಮಾನಪುರಾಣಗಳ ವಿಷಯವೂ ಅದರಲ್ಲಿ ಬರುತ್ತದೆ. ಮೊದಲನೆಯದರ ಕರ್ತೃ ಜಟಾಚಾರ್ಯ, ಎರಡನೆಯವರು ಯಾರದೆಂಬುದು ತಿಳಿಯದು. 

	ಹರಿವಂಶ, ಅಥವಾ ಅರಿಷ್ಟನೇಮಿಪುರಾಣ ಸಂಗ್ರಹವೆಂಬುದು 66 ಸರ್ಗಗಳುಳ್ಳ ಒಂದು ದೊಡ್ಡ ಕಾವ್ಯ. ಹರಿವಂಶದ ವಾಸುದೇವ ಮತ್ತು ಆತನ ಸಂತತಿಯ ಚರಿತ್ರೆ ಇದರ ವಸ್ತು. ಪ್ರಾಸಂಗಿಕವಾಗಿ, ಇಪ್ಪತ್ತೆರಡನೆಯ ತೀರ್ಥಂಕರನಾದ ನೇಮಿನಾಥನ ಜೀವನಚರಿತ್ರೆ ಇದರೊಳಗಿದೆ. ಅಲ್ಲದೆ ಚಾರುದತ್ತ, ಕೃಷ್ಣ ಮತ್ತು ಕೌರವಪಾಂಡವರ ವಿವರವಾದ ಇತಿಹಾಸ ಇಲ್ಲಿ ನಮಗೆ ದೊರೆಯುತ್ತದೆ. ಅಲ್ಲದೆ ಇದರಲ್ಲಿ ಮತತತ್ತ್ವಸಿದ್ಧಾಂತ ಮತ್ತು ಧಾರ್ಮಿಕೋಪದೇಶಗಳು ಒಳ್ಳೆಯ ಪ್ರಮಾಣದಲ್ಲಿ ಅಡಗಿವೆ.
(ಎ.ಎಸ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ